ಸುದ್ದಿ

ಬಿಜೆಪಿ ಮುಖಂಡನ ಭೀಕರ ಹತ್ಯೆ: ಆರು ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

Share It

​ಗಂಗಾವತಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಯುವ ಮೋರ್ಚಾ ನಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಗಂಗಾವತಿಯ ನ್ಯಾಯಾಲಯವು ಆರು ಮಂದಿ ಅಪರಾಧಿಗಳಿಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಮಹತ್ವದ ತೀರ್ಪು ನೀಡಿದೆ.

​2025ರ ಅಕ್ಟೋಬರ್ 8ರ ಮಧ್ಯರಾತ್ರಿ ಗಂಗಾವತಿಯ ರಾಣಾ ಪ್ರತಾಪ್ ಸಿಂಗ್ ವೃತ್ತದ ಬಳಿ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ (ಜೆಎನ್​ಎನ್ ವೆಂಕಿ) ಎಂಬಾತನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೆಂಕಟೇಶ್ ಅವರನ್ನು ಕಾರಿನಲ್ಲಿ ಬೆನ್ನಟ್ಟಿದ್ದ ಹಂತಕರು, ವಾಹನಕ್ಕೆ ಗುದ್ದಿಸಿ ಕೆಳಗೆ ಬೀಳಿಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

​ಕೊಲೆಗೆ ಕಾರಣವೇನು?
​ಮಾರುತಿ ಎಂಬ ಯುವಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಕೊಲೆಯಾದ ವೆಂಕಟೇಶ್ ಸಾಕ್ಷಿಯಾಗಿದ್ದರು ಹಾಗೂ ಸಂತ್ರಸ್ತನ ಚಿಕಿತ್ಸೆಗೆ ಬೆಂಬಲವಾಗಿ ನಿಂತಿದ್ದರು. ಇದೇ ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿಗಳು ಸಂಚು ರೂಪಿಸಿ ಈ ಕೃತ್ಯ ಎಸಗಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿತ್ತು.

​ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ರವಿ
​ವಿಜಯ್ (ಮೈಲಾರಿ),​ಧನರಾಜ್,​ಭೀಮ್ (ಭರತ್)
​ಸಲೀಮ್ ಮಹಮ್ಮದ್ ರಫೀಕ್,​ಗಂಗಾಧರ ಗೌಳಿ
ಈ ಆರು ಮಂದಿಯನ್ನು ದೋಷಿಗಳೆಂದು ಪರಿಗಣಿಸಿ ಗಲ್ಲು ಶಿಕ್ಷೆ ಹಾಗೂ ತಲಾ 3 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

“ಸಭ್ಯ ನಾಗರಿಕ ಸಮಾಜ ಇಂತಹ ಕ್ರೂರ ಕೃತ್ಯಗಳನ್ನು ಎಂದಿಗೂ ಸಹಿಸುವುದಿಲ್ಲ. ಅಪರಾಧಿಗಳ ಹಿನ್ನೆಲೆ ಹಾಗೂ ಲಭ್ಯವಿರುವ ಸಿಸಿಟಿವಿ ಸಾಕ್ಷ್ಯಗಳು ಕೃತ್ಯದ ಭೀಕರತೆಯನ್ನು ಸಾರುತ್ತಿವೆ. ಹೀಗಾಗಿ ಇವರಿಗೆ ಮರಣದಂಡನೆಯೇ ಸೂಕ್ತವಾದ ಶಿಕ್ಷೆ ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

​ಪೊಲೀಸರು ಸಲ್ಲಿಕೆ ಮಾಡಿದ್ದ 927 ಪುಟಗಳ ಬೃಹತ್ ಚಾರ್ಜ್‌ಶೀಟ್‌ ಮತ್ತು ಹಂತ ಹಂತವಾಗಿ ನಡೆಸಿದ ನಿಖರ ತನಿಖೆಗೆ ಈ ತೀರ್ಪಿನ ಮೂಲಕ ದೊಡ್ಡ ಜಯ ಸಿಕ್ಕಂತಾಗಿದೆ. ತಾಂತ್ರಿಕ ಸಾಕ್ಷ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಅಂಶಗಳಾಗಿವೆ.


Share It

You cannot copy content of this page