ಸುದ್ದಿ

ಪತ್ನಿಯ ಅಕ್ರಮ ಸಂಬಂಧಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ಬಲಿ: ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ನೋಡಿ ಮನನೊಂದು ಆತ್ಮಹತ್ಯೆ

Share It

​ಹೈದರಾಬಾದ್: ನಂಬಿಕೆಯೇ ಜೀವಾಳವಾಗಬೇಕಿದ್ದ ದಾಂಪತ್ಯದಲ್ಲಿ ಪತ್ನಿಯೇ ನಂಬಿಕೆ ದ್ರೋಹ ಎಸಗಿದ ಘಟನೆಯಿಂದ ಮನನೊಂದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಪತ್ನಿಯ ಅಕ್ರಮ ಸಂಬಂಧ ಮತ್ತು ಆಕೆಯ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಂಡಿದ್ದೇ ಈ ದುರಂತಕ್ಕೆ ಕಾರಣವಾಗಿದೆ.

​ಮೃತ ವ್ಯಕ್ತಿಯನ್ನು ಸೀತಾರಾಂ ಎಂದು ಗುರುತಿಸಲಾಗಿದೆ. ಇವರು ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ವಾಸವಾಗಿದ್ದು, ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಸೀತಾರಾಂ ಮತ್ತು ರೇಣುಕಾ ಅವರಿಗೆ 2018ರಲ್ಲಿ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

​ಪತ್ನಿ ರೇಣುಕಾ ಕಳೆದ ಒಂದೂವರೆ ವರ್ಷದಿಂದ ಮೂವರು ವ್ಯಕ್ತಿಗಳ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ರೇಣುಕಾಳ ಪ್ರಿಯಕರರಲ್ಲಿ ಒಬ್ಬನಾದ ರಮಣ ರೆಡ್ಡಿ ಎಂಬಾತ, ಆಕೆಯ ಜೊತೆಗಿನ ಖಾಸಗಿ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ. ಈ ವಿಡಿಯೋಗಳು ಸೀತಾರಾಂ ಅವರ ಗಮನಕ್ಕೆ ಬಂದಾಗ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದ ಹೆಂಡತಿಯ ಈ ಕೃತ್ಯದಿಂದ ಅವರು ಮಾನಸಿಕವಾಗಿ ಜರ್ಜರಿತರಾಗಿದ್ದರು.

​ಸಾಯುವ ಮುನ್ನ ಸೀತಾರಾಂ 19 ಪುಟಗಳ ಸುದೀರ್ಘ ಮರಣಪತ್ರ ಬರೆದಿದ್ದಾರೆ. ಅದರಲ್ಲಿ ತಮ್ಮ ನೋವನ್ನು ತೋಡಿಕೊಂಡಿರುವ ಅವರು,
​”ನನ್ನ ಹೆಂಡತಿಯ ನಿಜ ಸ್ವರೂಪ ತಿಳಿದ ಮೇಲೆ ನನಗೆ ಬದುಕುವ ಆಸೆಯೇ ಹೋಯಿತು. ಆಕೆಗೆ ಏನು ಬೇಕಿತ್ತು? ಪ್ರೀತಿಯೋ ಅಥವಾ ಕಾಮವೋ? ಯಾವ ಹೆಣ್ಣೂ ಕೂಡ ಇಂತಹ ದ್ರೋಹ ಮಾಡಬೇಡಿ,” ಎಂದು ಬರೆದಿದ್ದಾರೆ. ​ತನ್ನ ಪತ್ನಿ ಸಮಾಜಕ್ಕೆ ಹೇಗೆ ದ್ರೋಹ ಮಾಡಿದ್ದಾಳೆ ಮತ್ತು ತನ್ನನ್ನು ಹೇಗೆ ಹಂತ ಹಂತವಾಗಿ ಸಾಯಿಸಿದ್ದಾಳೆ ಎಂಬುದನ್ನು ಪತ್ರದಲ್ಲಿ ವಿವರಿಸಿದ್ದಾರೆ.

​ಸೀತಾರಾಂ ಸಾವಿನ ನಂತರ ಅವರ ಪೋಷಕರು ನೀಡಿದ ದೂರಿನ ಮೇರೆಗೆ ಹೈದರಾಬಾದ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸೀತಾರಾಂ ಬರೆದಿದ್ದ ಡೆತ್ ನೋಟ್ ಅನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ ಪೊಲೀಸರು, ಪತ್ನಿ ರೇಣುಕಾ ಹಾಗೂ ಆಕೆಯ ಪ್ರಿಯಕರರಾದ ರಮಣ ರೆಡ್ಡಿ ಮತ್ತು ಶ್ರವಣ್ ಎಂಬುವವರನ್ನು ಬಂಧಿಸಿದ್ದಾರೆ.

​ತಂದೆ ಸಾವನ್ನಪ್ಪಿ, ತಾಯಿ ಜೈಲು ಪಾಲಾದ ಹಿನ್ನೆಲೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಈಗ ಅನಾಥರಾಗಿದ್ದಾರೆ. ಒಬ್ಬ ಪ್ರತಿಭಾವಂತ ಇಂಜಿನಿಯರ್‌ನ ಈ ದುರಂತ ಅಂತ್ಯ ಮತ್ತು ಕುಟುಂಬದ ಹಳಿ ತಪ್ಪಿದ ಬದುಕು ಸಮಾಜದಲ್ಲಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ.


Share It

You cannot copy content of this page