ಸುದ್ದಿ

ವಿನಯ ಕುಲಕರ್ಣಿ ಶಾಸಕತ್ವ ರದ್ದು; ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

Share It

​ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಗೌಡರ್‌ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ ಕುಲಕರ್ಣಿ ಅವರ ಶಾಸಕ ಸ್ಥಾನ ಈಗಾಗಲೇ ರದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬುಧವಾರ ಅಧಿಕೃತವಾಗಿ ತಿಳಿಸಿದ್ದಾರೆ.

​ಸುದ್ದಿಗಾರರೊಂದಿಗೆ ಮಾತನಾಡಿದ ಅವರು
​”ವಿಧಾನಸಭೆಯ ಯಾವುದೇ ಸದಸ್ಯರನ್ನು ನೇರವಾಗಿ ಅನರ್ಹಗೊಳಿಸುವ ಅಧಿಕಾರ ಸಭಾಧ್ಯಕ್ಷರಿಗಿಲ್ಲ. ಆದರೆ, ನ್ಯಾಯಾಲಯದಿಂದ ಶಿಕ್ಷೆಯಾದ ಸಂದರ್ಭದಲ್ಲಿ ಕಾನೂನಿನ ನಿಯಮಗಳ ಪ್ರಕಾರ ಶಾಸಕ ಸ್ಥಾನವು ತಾನಾಗಿಯೇ ರದ್ದಾಗುತ್ತದೆ. ಒಂದು ವೇಳೆ ಈ ಶಿಕ್ಷೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕರೆ ಮಾತ್ರ ಅವರ ಶಾಸಕ ಸ್ಥಾನ ಮರುಸ್ಥಾಪನೆಯಾಗುತ್ತದೆ,” ಎಂದು ಯು.ಟಿ. ಖಾದರ್ ವಿವರಿಸಿದರು.

ವಿನಯ ಕುಲಕರ್ಣಿ ವಿಷಯದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಇಲ್ಲಿ ವಿಳಂಬ ಮಾಡುವಂತಹ ಯಾವುದೇ ವಿಷಯವೇ ಇಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
​”ಶಾಸಕ ಸ್ಥಾನ ರದ್ದಾದ ಬಳಿಕ ಅವರು ಸದನಕ್ಕೆ ಬರಲು ಸಾಧ್ಯವಿಲ್ಲ. ಈ ಬಗ್ಗೆ ಮಾಹಿತಿ ಇಲ್ಲದವರಿಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ ಎಂದರು.

​ಅನರ್ಹತೆ ವಿಚಾರದಲ್ಲಿ ರಾಜಕೀಯ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಸಭಾಧ್ಯಕ್ಷರು, “ಬಿಜೆಪಿ ಅಥವಾ ಕಾಂಗ್ರೆಸ್ ಎಂದು ನಾನು ಯಾವುದೇ ತಾರತಮ್ಯ ಮಾಡಿಲ್ಲ. ಕಾನೂನು ಎಲ್ಲರಿಗೂ ಒಂದೇ. ಶಾಸಕತ್ವ ರದ್ದಾದ ಮೇಲೆ ಅವರು ಸದನಕ್ಕೆ ಹಾಜರಾಗಲು ಅವಕಾಶವಿರುವುದಿಲ್ಲ,” ಎಂದು ಖಡಕ್ ಆಗಿ ಉತ್ತರಿಸಿದರು.


Share It

You cannot copy content of this page