ಸುದ್ದಿ

ರಾಜಸ್ಥಾನದಲ್ಲಿ ಲಂಚಕ್ಕೆ ಕೈಯೊಡ್ಡಿದ್ದ ಪಿಎಸ್ಐ ಸೇರಿ ಮೂವರ ಅಮಾನತು

Share It

ಬೆಂಗಳೂರು: ಆರೋಪಿಯನ್ನು ಬಂಧಿಸಲು ಹೊರ ರಾಜ್ಯ ರಾಜಸ್ಥಾನಕ್ಕೆ ಹೋಗಿದ್ದ ವೇಳೆ ಲಂಚಕ್ಕೆ ಕೈಯೊಡ್ಡಿ ಇಡೀ ಕರ್ನಾಟಕ ರಾಜ್ಯ ಮತ್ತು ಪೊಲೀಸ್ ಇಲಾಖೆಗೆ ಕಳಂಕ ತಂದಿಟ್ಟ ಬೆಂಗಳೂರಿನ ಎಚ್ಎಎಲ್ ಠಾಣೆಯ ಲೇಡಿ ಪಿಎಸ್‌ಐ ಅನಿತಾ ಹಾಗೂ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ.

ಈ ಕುರಿತು ಖುದ್ದು ಗೃಹ ಸಚಿವರು ಸೋಮವಾರದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ರಾಜ್ಯದ ಹೆಸರಿಗೆ ಮಸಿ ಬಳಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಎಚ್ಎಎಲ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ಪಿಎಸ್‌ಐ ಕೆ. ಅನಿತಾ, ಹೆಡ್ ಕಾನ್‌ಸ್ಟೇಬಲ್‌ಗಳಾದ ಉಳುವಪ್ಪ ತೆಗೂರು ಹಾಗೂ ಯತೀಶ್ ಕುಮಾ‌ರ್ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದರು. ಆದರೆ, ಅಲ್ಲಿ ಆರೋಪಿಯನ್ನು ಬಂಧಿಸುವ ಬದಲು, ಕೇಸ್ ಇತ್ಯರ್ಥ ಪಡಿಸಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದರಿಂದ ಬೇಸತ್ತ ಸಂತ್ರಸ್ತರು ಜೈಪುರದ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. ಜೈಪುರ ಎಸಿಬಿ ಅಧಿಕಾರಿಗಳು ಜಾಲ ಹೆಣೆದು, ಕರ್ನಾಟಕದ ಈ ಮೂವರು ಪೊಲೀಸರು ಲಂಚ ಪಡೆಯುತ್ತಿದ್ದಾಗಲೇ ರೆಡ್‌ಹ್ಯಾಂಡ್ ಆಗಿ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದರು.

ಲಂಚದ ಆರೋಪದ ಮೇಲೆ ಬಂಧಿತರಾಗಿರುವ ಪಿಎಸ್‌ಐ ಅನಿತಾ ಸೇರಿದಂತೆ ಮೂವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಈ ಕೃತ್ಯದ ಹಿಂದೆ ಇಲಾಖೆಯ ಹಿರಿಯ ಅಧಿಕಾರಿಗಳು ಯಾರಾದರೂ ಶಾಮೀಲಾಗಿದ್ದಾರಾ ಎಂಬ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ರಿಪೋರ್ಟ್ ನೀಡಲು ಖುದ್ದು ಗೃಹಸಚಿವರೇ ಸೂಚಿಸಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಸಚಿವರು, “ವ್ಯವಸ್ಥೆಯನ್ನು ಬೇರು ಮಟ್ಟದಿಂದ ಸರಿಪಡಿಸಬೇಕಿದೆ. ಇದಕ್ಕೆ ಸ್ವಲ್ಪ ಸಮಯ ಬೇಕು. ತಪ್ಪು ಮಾಡಿದವರು ಎಷ್ಟೇ ಪ್ರಭಾವಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ” ಎಂದು ಎಚ್ಚರಿಕೆ ನೀಡಿದರು.


Share It

You cannot copy content of this page