ಸುದ್ದಿ

ಲಖನೌ ಅಗ್ನಿ ದುರಂತ: ಸಾವಿನಲ್ಲೂ ಒಂದಾದ ಪ್ರೇಮಿಗಳು; ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಜೋಡಿಯ ದುರಂತ ಅಂತ್ಯ!

Share It

ಉತ್ತರ ಪ್ರದೇಶದ ಲಖನೌನಲ್ಲಿರುವ ಕೋಚಿಂಗ್ ಸೆಂಟರ್ ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವಿಗೀಡಾದವರ ಪೈಕಿ 30 ವರ್ಷದ ಅನಾಮಿಕಾ ಸಾಮಂತ್ ಮತ್ತು 27 ವರ್ಷದ ನೀಲೇಶ್ ಕುಮಾರ್ ಇಬ್ಬರೂ ಕೂಡ ಇದ್ದು ಇವರು ಅನಿಮೇಷನ್ ಕಲಾವಿದರಾಗಿದ್ದರು. ಈ ವರ್ಷದ ನವೆಂಬರ್‌ನಲ್ಲಿ ಅವರ ವಿವಾಹ ನಿಶ್ಚಯವಾಗಿತ್ತು. ದುರದೃಷ್ಟಕರ ಅಗ್ನಿ ಅವಘಡದಲ್ಲಿ ಪ್ರೇಮಿಗಳು ದುರಂತ ಅಂತ್ಯ ಕಂಡಿದ್ದಾರೆ.

ಈ ಭೀಕರ ಅಗ್ನಿ ಅವಘಡದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಇದೇ ದುರಂತವು ನವೆಂಬರ್‌ನಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದ ಯುವ ಜೋಡಿಯ ಕನಸುಗಳನ್ನೂ ಛಿದ್ರ ಮಾಡಿದೆ. ಅನಾಮಿಕಾ ಸಾಮಂತ್ ಮತ್ತು ನೀಲೇಶ್‌ ಕುಮಾ‌ರ್ ಇಬ್ಬರೂ ಕೂಡ ಅನಿಮೇಷನ್‌ ಕಲಾವಿದರಾಗಿದ್ದರು. ಈ ವರ್ಷದ ನವೆಂಬರ್‌ನಲ್ಲಿ ಅವರ ವಿವಾಹ ನಿಗದಿಯಾಗಿತ್ತು. ಆದರೆ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಮೂಲಗಳ ಪ್ರಕಾರ ಬೆಂಕಿಗಾಹುತಿಯಾದ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ತಮ್ಮ ಕಂಪನಿಯ ಕಚೇರಿಯಲ್ಲಿ ಸಿಲುಕಿಕೊಂಡಿದ್ದ ಈ ಜೋಡಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇಬ್ಬರೂ 3ಡಿ ಆರ್ಟ್ ನಿರ್ಮಾಣ ಹಾಗೂ ಗೇಮ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ಹೆಡ್ ಹಾಪರ್ ಸ್ಟುಡಿಯೋಸ್ ಸಂಸ್ಥೆಯಲ್ಲಿ ಅನಿಮೇಷನ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮೂರು ವರ್ಷಗಳ ಹಿಂದೆ ಕೆಲಸದ ಸ್ಥಳದಲ್ಲಿಯೇ ಅನಾಮಿಕಾ ಮತ್ತು ನೀಲೇಶ್ ಪರಿಚಯವಾಗಿದ್ದರು. ಆರಂಭದಲ್ಲಿ ವೃತ್ತಿಪರ ಸ್ನೇಹವಾಗಿದ್ದ ಸಂಬಂಧ ಕ್ರಮೇಣ ಆತ್ಮೀಯತೆಯಾಗಿ ಬೆಳೆಯಿತು. ಬಳಿಕ ಅದು ಪ್ರೀತಿಗೆ ತಿರುಗಿ, ವಿವಾಹಕ್ಕೆ ಕಾರಣವಾಯಿತು. ಉಭಯ ಕುಟುಂಬಗಳ ಒಪ್ಪಿಗೆಯೊಂದಿಗೆ ಇತ್ತೀಚೆಗಷ್ಟೇ ಅವರ ನಿಶ್ಚಿತಾರ್ಥವೂ ನೆರವೇರಿತ್ತು.

ಕಳೆದ ವಾರ ಅನಾಮಿಕಾ ಅವರ ಪೋಷಕರು ಲಖನೌಗೆ ಬಂದು ಮದುವೆಯ ಸಿದ್ಧತೆಗಳ ಕುರಿತು ಅಂತಿಮ ಮಾತುಕತೆ ನಡೆಸಿದ್ದರು. “ಆ ಭೇಟಿಯ ಸಂದರ್ಭದಲ್ಲಿ ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ್ದವು. ವಿವಾಹದ ಎಲ್ಲಾ ಸಿದ್ಧತೆಗಳು ಬಹುತೇಕ ಅಂತಿಮಗೊಂಡಿದ್ದವು,” ಎಂದು ನೀಲೇಶ್ ಅವರ ಹಿರಿಯ ಸಹೋದರ ಹಾಗೂ ಆರ್ಕಿಟೆಕ್ಚರಲ್ ವಿಜುವಲೈಸರ್ ಆಗಿರುವ ಅಭಿಷೇಕ್ ಕುಮಾ‌ರ್ ತಿಳಿಸಿದ್ದಾರೆ.

ಕುಟುಂಬದವರ ಪ್ರಕಾರ, ನೀಲೇಶ್ ಅವರ ಮೃತದೇಹ ಯಾವುದೇ ಸುಟ್ಟ ಗಾಯಗಳಿಲ್ಲದೆ ಗುರುತಿಸಬಹುದಾದ ಸ್ಥಿತಿಯಲ್ಲಿತ್ತು. ಇದರಿಂದ ಅವರು ಬೆಂಕಿಯಿಂದಲ್ಲ, ಹೊಗೆ ಉಸಿರಾಟದಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.


Share It

You cannot copy content of this page