ರಾಯಚೂರು: ಲೇಔಟ್ ನಿರ್ಮಾಣಕ್ಕಾಗಿ ಎರಡು ಎಕರೆ ಜಮೀನಿಗೆ ಖಾತ ನೀಡಲು ವ್ಯಕ್ತಿಯೊಬ್ಬರಿಂದ ₹1.5 ಲಕ್ಷ ಲಂಚ ಪಡೆದ ತಾಲ್ಲೂಕಿನ ಬಿಜನಗೇರಾ ಗ್ರಾಮದ ಪಿಡಿಒ ಲಕ್ಷ್ಮೀ ಪ್ಯಾಟಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಿಜನಗೇರಾದ ಮೆಹಬೂಬ್ ಅಲಿ ಅವರು ಪಂಚಾಯಿತಿ ವ್ಯಾಪ್ತಿಯ ಉಂದ್ರಾಳದೊಡ್ಡಿ ಗ್ರಾಮದಲ್ಲಿ ಲೇಔಟ್ ನಿರ್ಮಾಣಕ್ಕೆ ಎರಡು ಎಕರೆ ಜಮೀನಿನ ಖಾತಾ ನೀಡುವಂತೆ ಕೇಳಿದ್ದರು. ಖಾತಾ ಕೊಡಲು ಪಿಡಿಒ ಅವರು ₹2 ಲಕ್ಷ ಬೇಡಿಕೆ ಇಟ್ಟಿದ್ದಲ್ಲದೇ, ತನ್ನ ಪತಿಗೆ ₹1.50 ಲಕ್ಷ ಫೋನ್ ಪೇ ಮಾಡುವಂತೆ ಸೂಚಿಸಿದ್ದರು.
ಈ ಸಂಬಂಧ ಮೆಹಬೂಬ್ ಅಲಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅಲಿ ಅವರು ಲಕ್ಷ್ಮೀ ಪ್ಯಾಟಿ ಅವರ ಪತಿಗೆ ಫೋನ್‌ಪೇ ಮಾಡಿದ ನಂತರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಕ್ಷ್ಮೀಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.