ಬೆಂಗಳೂರು: ತನ್ನ ಮೋಜಿನ ಜೀವನಕ್ಕಾಗಿ ಮಾಡಿಕೊಂಡಿದ್ದ 30 ಲಕ್ಷ ರೂಪಾಯಿ ಸಾಲದ ಬಗ್ಗೆ ಪ್ರಶ್ನಿಸಿ ಬುದ್ಧಿವಾದ ಹೇಳಿದ ಒಂದೇ ಕಾರಣಕ್ಕೆ, ಹೆತ್ತ ತಂದೆ, ತಾಯಿ ಹಾಗೂ ತಂಗಿಯನ್ನು ಮಗಳೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ನೆಲ್ಲೂರಹಳ್ಳಿ ನಿವಾಸಿಗಳಾದ ಸೋಮಸುಂದರ್ (52), ಅವರ ಪತ್ನಿ ಮುತ್ತುಲಕ್ಷ್ಮೀ (48) ಹಾಗೂ ಕಿರಿಯ ಪುತ್ರಿ ಸುಪ್ರಿಯಾ (19) ಕೊಲೆಯಾದ ದುರ್ದೈವಿಗಳು. ಈ ಘೋರ ತ್ರಿವಳಿ ಹತ್ಯೆ ಎಸಗಿದ ಬಳಿಕ ಮೃತರ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್ ತಲೆಮರೆಸಿಕೊಂಡಿದ್ದು, ಪೊಲೀಸರು ಇವರಿಗಾಗಿ ಬಲೆ ಬೀಸಿದ್ದಾರೆ.
ಮೂಲತಃ ತಮಿಳುನಾಡಿನವರಾದ ಸೋಮಸುಂದರ್ ಅವರು ಕಳೆದ ಎರಡು ದಶಕಗಳಿಂದ ನೆಲ್ಲೂರಹಳ್ಳಿಯಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶಿಸ್ತಿನಿಂದ ಬೆಳೆಸಿದ್ದರು. ಆರೋಪಿಗಳಾದ ಶ್ವೇತಾ ಹಾಗೂ ಕೆನೆತ್ ನ್ಯೂ ಹಾರಿಜನ್ ಕಾಲೇಜಿನಲ್ಲಿ ಒಟ್ಟಿಗೆ ಬಿ.ಟೆಕ್ ವ್ಯಾಸಂಗ ಮಾಡಿದ್ದರು. ಪ್ರಸ್ತುತ ಖಾಸಗಿ ಕಂಪನಿಗಳಲ್ಲಿ ಟೆಕ್ಕಿಗಳಾಗಿದ್ದ ಇಬ್ಬರೂ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು.
ಇಬ್ಬರೂ ಲಿವಿಂಗ್ ಇನ್ ರಿಲೇಷನ್‌ನಲ್ಲಿದ್ದು, ಎರಡು ತಿಂಗಳ ಹಿಂದಷ್ಟೇ ಸೀಗೆಹಳ್ಳಿಯ ಡಾಮಿನಿಕ್ ಬಡಾವಣೆಯ ಸಾಯಿಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಬಂದಿದ್ದರು. ವೈಯಕ್ತಿಕ ಕಾರಣಗಳಿಗಾಗಿ ಪೋಷಕರೊಂದಿಗೆ ವೈಮನಸ್ಸು ಹೊಂದಿದ್ದ ಶ್ವೇತಾ, ಆರಂಭದಲ್ಲಿ ತಾನಿರುವ ಜಾಗವನ್ನು ಮುಚ್ಚಿಟ್ಟಿದ್ದಳು. ಆದರೆ ಇತ್ತೀಚೆಗೆ ನಿರಂತರ ಸಂಪರ್ಕದ ನಂತರ ಹೆತ್ತವರಿಗೆ ತನ್ನ ವಿಳಾಸ ನೀಡಿದ್ದಳು.
ಕೊಲೆಗೆ ಕಾರಣವಾದ 30 ಲಕ್ಷ ರೂ. ಸಾಲ ಮತ್ತು ನೋಟಿಸ್!
ಬ್ಯಾಂಕ್‌ವೊಂದರಲ್ಲಿ ಶ್ವೇತಾ ಸುಮಾರು ₹30 ಲಕ್ಷ ಸಾಲ ಪಡೆದಿದ್ದಳು ಎನ್ನಲಾಗಿದೆ. ಆದರೆ ಆಕೆ ಸರಿಯಾಗಿ ಮಾಸಿಕ ಕಂತು (EMI) ಪಾವತಿಸದ ಕಾರಣ, ಮಾರತ್‌ಹಳ್ಳಿಯಲ್ಲಿರುವ ತಂದೆಯ ಮನೆಗೆ ಬ್ಯಾಂಕ್‌ನಿಂದ ನೋಟಿಸ್‌ಗಳು ಬಂದಿದ್ದವು. ಜೊತೆಗೆ ಮೊಬೈಲ್‌ಗೂ ಸಾಲ ಮರುಪಾವತಿಯ ಸಂದೇಶಗಳು ಬಂದಿದ್ದವು. ಇದರಿಂದ ಆತಂಕಗೊಂಡ ತಾಯಿ ಮುತ್ತುಲಕ್ಷ್ಮೀ, ಭಾನುವಾರ ಮಗಳಿದ್ದ ಸಾಯಿಗ್ರೀನ್ ಅಪಾರ್ಟ್‌ಮೆಂಟ್‌ಗೆ ಹೋಗಿದ್ದರು. ಅಲ್ಲಿ ಮಗಳು ಪ್ರಿಯಕರನೊಂದಿಗೆ ಇರುವುದನ್ನು ಕಂಡು ಆಕೆಗೆ ಬೈದು ಬುದ್ಧಿ ಹೇಳಿದ್ದಾರೆ.
ತಾಯಿ ಬುದ್ಧಿ ಹೇಳಿದ್ದಕ್ಕೆ ತೀವ್ರ ಕೋಪಗೊಂಡ ಶ್ವೇತಾ ಮತ್ತು ಕೆನೆತ್, ಮೊದಲು ತಾಯಿ ಮುತ್ತುಲಕ್ಷ್ಮೀಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಆ ಬಳಿಕ ಏನೂ ತಿಳಿಯದಂತೆ ತಂದೆ ಸೋಮಸುಂದರ್ ಹಾಗೂ ತಂಗಿ ಸುಪ್ರಿಯಾ ಅವರಿಗೆ ಫೋನ್ ಮಾಡಿ, “ಊಟಕ್ಕೆ ಮನೆಗೆ ಬನ್ನಿ” ಎಂದು ಆಹ್ವಾನಿಸಿದ್ದಾರೆ. ಅವರು ಮನೆಗೆ ಬರುತ್ತಿದ್ದಂತೆ ಪೂರ್ವ ಸಂಚಿನಂತೆ ಇಬ್ಬರ ಮೇಲೂ ಚಾಕುವಿನಿಂದ ಬರ್ಬರ ದಾಳಿ ನಡೆಸಿ ಕೊಂದಿದ್ದಾರೆ. ನಿನ್ನೆ ರಾತ್ರಿ ಮೂವರೂ ಮೃತಪಟ್ಟ ಬಳಿಕ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಹತ್ಯೆಯಾದ ಮೂವರ ಮೃತದೇಹಗಳನ್ನು ಬಿದರಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಿ ಪರಿಶೀಲಿಸಿದಾಗ, ಆರೋಪಿಗಳ ಕ್ರೌರ್ಯ ಅನಾವರಣಗೊಂಡಿದೆ. ಮೃತದೇಹಗಳ ಮೇಲೆ ಬರೋಬ್ಬರಿ 30 ರಿಂದ 40 ಬಾರಿ ಚಾಕುವಿನಿಂದ ಇರಿದಿರುವುದು ವೈದ್ಯಕೀಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.
ಇನ್ನು ಶ್ವೇತಾಳ ಪ್ರಿಯಕರ ಕೆನೆತ್ ಮೇಡಹಳ್ಳಿಯ ನಿವಾಸಿಯಾಗಿದ್ದು, ಆತನ ತಂದೆ ಹೆಚ್‌ಎಎಲ್‌ನಲ್ಲಿ ಇಂಜಿನಿಯರ್ ಆಗಿದ್ದಾರೆ. “ನಾನು ಹೈದರಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಅಲ್ಲೇ ನೆಲೆಸಿದ್ದೇನೆ” ಎಂದು ಕೆನೆತ್ ತನ್ನ ಹೆತ್ತವರಿಗೂ ಸುಳ್ಳು ಹೇಳಿದ್ದ. ಕೃತ್ಯದ ಬಳಿಕ ಪೊಲೀಸರು ಕೆನೆತ್ ಪೋಷಕರ ಮನೆಗೆ ಹೋಗಿ ವಿಚಾರಣೆ ನಡೆಸಿದಾಗ ಈ ಆಘಾತಕಾರಿ ಸತ್ಯ ಹೊರಬಿದ್ದಿದೆ.
ಆರೋಪಿಗಳ ಪತ್ತೆಗೆ 6 ವಿಶೇಷ ತಂಡಗಳ ರಚನೆ: ಪೊಲೀಸ್ ಆಯುಕ್ತ
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಕೆ.ಆರ್. ಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಮೂವರ ಕೊಲೆಯಾಗಿದೆ. ಇದು ಅತ್ಯಂತ ಗಂಭೀರವಾದ ಅಪರಾಧವಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ 6 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತಾಂತ್ರಿಕ ಸುಳಿವು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಮಿಳುನಾಡು ಸೇರಿದಂತೆ ಹಲವೆಡೆ ಕೆ.ಆರ್. ಪುರ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ” ಎಂದಿದ್ದಾರೆ.
”ಸಾಯುವ ಮುನ್ನ ಆರೋಪಿಯ ತಂದೆ ಸೋಮಸುಂದರ್ ನೀಡಿದ್ದ ಹೇಳಿಕೆ ಹಾಗೂ ಇನ್ನಿತರ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಲಾಗಿದೆ. ಪೋಸ್ಟ್‌ಮಾರ್ಟಮ್ ವರದಿ ಬಂದ ಬಳಿಕ ಮತ್ತು ಆರೋಪಿಗಳು ಸಿಕ್ಕಿಬಿದ್ದ ನಂತರ ಈ ತ್ರಿವಳಿ ಹತ್ಯೆಯ ಸಂಪೂರ್ಣ ವಿವರಗಳು ಲಭ್ಯವಾಗಲಿವೆ” ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.