ಸುದ್ದಿ

​ಫೋಟೋ ಕ್ರೇಜ್‌ಗೆ ಬಲಿಯಾಯ್ತು ಇಡೀ ಕುಟುಂಬ: ಮುತ್ತತ್ತಿಯ ಕಾವೇರಿ ನದಿಯಲ್ಲಿ ಮುಳುಗಿ ಐವರ ದುರ್ಮರಣ

Share It

ಮಂಡ್ಯ:ದೇವರ ದರ್ಶನ ಮುಗಿಸಿ ಕುಟುಂಬದ ಜೊತೆ ಕಾವೇರಿ ನದಿಯಲ್ಲಿ ಸಂಭ್ರಮಿಸಲು ಹೋದ ಒಂದು ಇಡೀ ಕುಟುಂಬ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ 2026 ಜೂನ್ 24ರಂದು ಮಂಡ್ಯ ಜಿಲ್ಲೆಯ ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಸಂಭವಿಸಿದೆ.

ಮೃತರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕುಟುಂಬದವರಾಗಿದ್ದು, ಮುತ್ತತ್ತಿಯ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ನದಿತೀರಕ್ಕೆ ತೆರಳಿದ್ದರು. ಫೋಟೋ ತೆಗೆಯುವ ವೇಳೆ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಭೀಕರ ದುರಂತದಲ್ಲಿ
ರವಿ ಪತ್ನಿ ಶ್ವೇತಾ, ಮಗಳು ಚೈತ್ರ, ಅಕ್ಕ ವಿಜಯಮ್ಮ, ವಿಜಯಮ್ಮ ಮಗಳು ಪ್ರಿಯಾಂಕಾ ಹಾಗೂ ಕಾರು ಚಾಲಕ ಮಹೇಶ್ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ಬ್ಯಾಡರಹಳ್ಳಿ ಮೂಲದ ರವಿ ಎಂಬುವವರ ಕುಟುಂಬ ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ನೆಲೆಸಿತ್ತು. ಎಂದಿನಂತೆ ಬದುಕಿನ ಜಂಜಾಟದಲ್ಲಿದ್ದ ಕುಟುಂಬಸ್ಥರು, ದೇವರ ದರ್ಶನ ಪಡೆಯಲು ಬಾಡಿಗೆ ಕಾರು ಮಾಡಿಕೊಂಡು ಹೊರಟಿದ್ದರು.

ಮೊದಲು ಕಬ್ಬಾಳಮ್ಮ ದೇವರ ದರ್ಶನ ಮುಗಿಸಿದ ಕುಟುಂಬ, ಸಂಜೆ 4:30ರ ಸುಮಾರಿಗೆ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ತಲುಪಿದೆ. ಅಲ್ಲಿನ ಆಂಜನೇಯ ಸ್ವಾಮಿಯ ಪೂಜೆಯನ್ನೂ ಮುಗಿಸಿದ ಬಳಿಕ, ಸಂಜೆ 4:45ರ ಸುಮಾರಿಗೆ ಕಾವೇರಿ ನದಿಯ ತಟಕ್ಕೆ ಬಂದಿದ್ದಾರೆ.

ಹೋಮ್ ಗಾರ್ಡ್‌ಗಳ ಎಚ್ಚರಿಕೆ ನಿರ್ಲಕ್ಷಿಸಿ ನದಿಗೆ ಇಳಿದದ್ದೇ ತಪ್ಪಾಯ್ತು!

ನದಿಯ ದಂಡೆಯಲ್ಲಿದ್ದ ಹೋಮ್ ಗಾರ್ಡ್‌ಗಳು “ನೀರಿಗೆ ಇಳಿಯಬೇಡಿ, ಅಪಾಯವಿದೆ” ಎಂದು ಕೂಗಿ ಕೂಗಿ ಎಚ್ಚರಿಕೆ ನೀಡಿದ್ದರೂ, ಕುಟುಂಬಸ್ಥರು ಮಾತ್ರ “ನೀರು ಕಡಿಮೆ ಇದೆ, ಏನೂ ಆಗಲ್ಲ” ಎಂದುಕೊಂಡಿದ್ದಾರೆ. ನದಿಯೊಳಗೆ ಒಂದು ಸುಂದರವಾದ ಫೋಟೋ ತೆಗೆದುಕೊಳ್ಳಬೇಕೆಂಬ ಹಂಬಲದಿಂದ ಇಡೀ ಕುಟುಂಬ ನೀರಿಗೆ ಇಳಿದಿದೆ.

ಫೋಟೋ ತೆಗೆದುಕೊಳ್ಳುವ ಗಡಿಬಿಡಿಯಲ್ಲಿ ಮೊದಲು 50 ವರ್ಷದ ವಿಜಯಮ್ಮ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಹೋದ ಕುಟುಂಬದ ಇತರ ಸದಸ್ಯರು ಒಬ್ಬರಾದ ಮೇಲೆ ಒಬ್ಬರಂತೆ ನೀರಿನ ಭೀಕರ ಸೆಳತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐವರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ.


Share It

You cannot copy content of this page