ಮುಂಬೈ: ಬಾಡಿಗೆ ತಾಯ್ತನದ ಪ್ರಕರಣದಲ್ಲಿ ವೀರ್ಯಾಣು, ಅಂಡಾಣು ದಾನಿಗಳು ಜನಿಸುವ ಮಕ್ಕಳ ಮೇಲೆ ಯಾವ ಹಕ್ಕನ್ನು ಸಾಧಿಸುವಂತಿಲ್ಲ ಎಂದು ಬಾಂಬ್ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ ಅಂಡಾಣು ದಾನಿ ಮಕ್ಕಳ ಭೇಟಿಗೆ ಅಡ್ಡಿಪಡಿಸಿದ ಕಾರಣದಿಂದಾಗಿ ಮಕ್ಕಳಿಂದ ದೂರವಿದ್ದ ತಾಯಿಗೆ 5 ವರ್ಷದ ಅವಳಿ ಮಕ್ಕಳನ್ನು ಭೇಟಿಯಾಗಲು ಕೋಟ್೯ ಅವಕಾಶ ಕೊಟ್ಟಿದೆ.
ಏನಿದು ಪ್ರಕರಣ: ಮಹಿಳೆಯೊಬ್ಬರು ತಮಗೆ ಮಕ್ಕಳಾಗದ ಕಾರಣ ತನ್ನ ಸೋದರಿಯ ಅಂಡಾಣು ದಾನ ಪಡೆದು ಗರ್ಭಧರಿಸಿ ಅವಳಿ ಮಕ್ಕಳಿಗೆ ಜನ್ಮನೀಡಿದ್ದರು. ನಂತರ ಅಂಡಾಣು ನೀಡಿದ ಸೋದರಿಯ ಕುಟುಂಬಕ್ಕೆ ಅಪಘಾತವಾಗಿ ಆಕೆಯ ಪತಿ ಮತ್ತು ಮಕ್ಕಳು ಸಾವನ್ನಪ್ಪಿದ್ದರು.
ಇತ್ತ ಪತ್ನಿಯೊಂದಿಗೆ ಜಗಳವಾಡಿಕೊಂಡು ಅವಳಿ ಮಕ್ಕಳ ತಂದೆ ಮಕ್ಕಳೊಂದಿಗೆ ಹೆಂಡತಿಯಿಂದ ಪ್ರತ್ಯೇಕವಾಗಿ ಬೇರೊಂದು ಮನೆಯಲ್ಲಿ ವಾಸ ಆರಂಭಿಸಿದ್ದನು. ಜೊತೆಗೆ ಅಂಡಾಣು ದಾನ ಮಾಡಿದ್ದ ಸೋದರಿ ಕೂಡಾ ಅದೇ ಮನೆ ಸೇರಿಕೊಂಡಿದ್ದಳು. ಬಳಿಕ ಅವಳಿಮಕ್ಕಳನ್ನು ಹಡೆದ ತಾಯಿಗೆ ಮಕ್ಕಳನ್ನು ಭೇಟಿ ಮಾಡಲು ಅವಕಾಶ ಕೊಡದೆ ದೂರ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಮಕ್ಕಳ ತಾಯಿ ಕೋಟ್೯ ಮಕ್ಕಳ ಭೇಟಿಗೆ ಅವಕಾಶ ಕೋರಿ ಕೋಟ್೯ ಮೆಟ್ಟಿಲೇರಿದ್ದರು. ಈ ವೇಳೆ ಅವಳಿ ಮಕ್ಕಳ ತಂದೆ ಅಂಡಾಣು ದಾನ ಮಾಡಿದ್ದ ಕಾರಣ ತನ್ನ ಪತ್ನಿಯ ಸೋದರಿಗೂ ಮಕ್ಕಳ ಮೇಲೆ ಹಕ್ಕಿದೆ, ಹಡೆದ ಪತ್ನಿಗೆ ಮಕ್ಕಳ ಮೇಲೆ ಯಾವುದೇ ಹಕ್ಕಿಲ್ಲ ಎಂದು ವಾದಿಸಿದ್ದರು.
ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ ಅಂಡಾಣು ದಾನ ಮಾಡಿದ ಮಾತ್ರಕ್ಕೆ ಮಕ್ಕಳ ಮೇಲೆ ಹಕ್ಕು ಸಾಧಿಸುವಂತಿಲ್ಲ ಎಂದು ಹೇಳಿ ತಾಯಿಗೆ ಮಕ್ಕಳ ಭೇಟಿಗೆ ಅವಕಾಶ ಮಾಡಿ ಕೊಟ್ಟಿದೆ.