ಬೆಂಗಳೂರು: ಹಣಕಾಸು ವಿವಾದ ವಿಚಾರವಾಗಿ ದೂರುದಾರರ ಸಂಬಂಧಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದ ಪ್ರಕರಣ ಸಂಬಂಧ ಸಿಐಡಿ
ಇನ್‌ಸ್ಪೆಕ್ಟರ್ ವಿರುದ್ದ ಶಿಸ್ತು ಕ್ರಮದ ಜತೆ ಸಂತ್ರಸ್ತರಿಗೆ ₹2 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಶಿಫಾರಸು ಮಾಡಿದೆ.
ಸಿಐಡಿ ಇನ್ಸ್‌ಪೆಕ್ಟರ್ ಎ.ಡಿ. ನಾಗರಾಜ್ ಮೇಲೆ ಆರೋಪ ಬಂದಿದ್ದು, ನಾಲ್ಕು ವರ್ಷಗಳ ಹಿಂದೆ ಹೆಣ್ಣೂರಿನ ಕಾರ್ಮಿಕ ಚಂದ್ರಶೇಖರ್‌ಗೆ ಕಿರುಕುಳ ನೀಡಿದ್ದ ಆರೋಪದ ಮೇರೆಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು, ಅಕ್ರಮ ಬಂಧನದಲ್ಲಿಟ್ಟು ದೌರ್ಜನ್ಯ ನಡೆಸಿರುವುದು ರುಜುವಾದ ಮೇರೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.
2021ರಲ್ಲಿ ₹12 ಲಕ್ಷ ಹಣದ ವಿಚಾರವಾಗಿ ಉದ್ಯಮಿಗ ಳಾದ ಮಾಧವ ರಾಜು ಹಾಗೂ ಹೆಣ್ಣೂರಿನ ರಾಜು ಮಧ್ಯೆ ವಿವಾದವಾಗಿತ್ತು. ಈ ಹಣ ವಸೂಲಿ ಮಾಡಿಕೊಡುವಂತೆ ತಮ್ಮ ಪರಿಚಿತ ಸಿಐಡಿ ಪಿಐ ನಾಗ ರಾಜು ಅವರಿಗೆ ಮಾಧವ ರಾಜು ಕೋರಿದ್ದರು. ಆದರೆ, ಈ ಸಂಬಂಧ ಯಾವುದೇ ದೂರು ದಾಖಲಿಸದೆ ನಾಗರಾಜು ಅವರು, ಏಕಾಏಕಿ ರಾಜು ಅವರ ಕೈಗಾರಿಕೆ ಮೇಲೆ ದಾಳಿ ನಡೆಸಿ ಕಚೇರಿ ಕೆಲಸಗಾರ ಚಂದ್ರಶೇಖರ್‌ನನ್ನು ಪಿಐ ವಶಕ್ಕೆ ಪಡೆದು ಸಿಐಡಿ ಕಚೇರಿಗೆ ಕರೆತಂದಿದ್ದರು. ಅಲ್ಲದೆ ಕ12 ಲಕ್ಷ ಮೌಲ್ಯದ ಡಿಜಿಟ್ ಟ್ಯಾಕ್ ಮೆಷಿನ್ ಅನ್ನು ಸಹ ನಾಗರಾಜು ಜಪ್ತಿ ಮಾಡಿಕೊಂಡು ಹೋಗಿದ್ದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ರಾಜು ದೂರು ನೀಡಿದ್ದರು ಎಂದು ಆಯೋಗ ತಿಳಿಸಿದೆ.
ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ 1993 ಕಲಂ 18(ಇ) ಪ್ರಕಾರ ಶಿಫಾರಸು ಪ್ರತಿ ತಲುಪಿದ ಒಂದು ತಿಂಗಳ ಒಳಗಾಗಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಇಲಾಖೆ ಮಹಾನಿರ್ದೇಶಕರು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.