ಈ-ನ್ಯೂಸ್.ಇನ್ (e-news.in)
ಬೆಂಗಳೂರು: ವಯಸ್ಸಾದ ಅತ್ತೆ- ಮಾವನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ, ಕಿರುಕುಳ ಕೊಟ್ಟಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಪ್ರಿಯದರ್ಶಿನಿಗೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ( ಬಿಎಂಆರ್‌ಸಿಐ) ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಘಟನೆ ಬಗ್ಗೆ ಕೂಡಲೇ ಉತ್ರರ ನೀಡಬೇಕೆಂದು ಬಿಎಂಆರ್‌ಸಿಐ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಬಿಎಂಆರ್‌ಸಿಐ ತುರ್ತು ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿ (ಸಿಎಂಓ) ಪ್ರಿಯದರ್ಶಿನಿ ಅವರಿಗೆ ಲಿಖಿತ ಸಮಾಜಾಯಿಷಿ ನೀಡಲು ಸೂಚಿಸಲಾಗಿದ್ದು, ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಯ್ಸನ್ ನಿರ್ದೇಶನದ ಮೇರೆಗೆ ನೋಟಿಸ್ ನೀಡಲಾಗಿದೆ.
ಡಾ| ಪ್ರಿಯದರ್ಶಿನಿ ಇತ್ತೀಚೆಗೆ ತಮ್ಮ ಮಕ್ಕಳ ಜೊತೆ ಸೇರಿ ವಯಸ್ಸಾದ ಅತ್ತೆ- ಮಾವನನ್ನು ಥಳಿಸಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಕಳೆದ ಹತ್ತು ವರ್ಷದಿಂದಲೂ ಡಾ| ಪ್ರಿಯದರ್ಶಿನಿ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಿಯದರ್ಶಿನಿ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೂ ಅತ್ತೆ, ಮಾವನ ಮನೆಗೆ ತೆರಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.