ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಖಾಲಿ ಇರುವ ಕುಲಪತಿ ಹುದ್ದೆಗೆ ನೂರಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರೊ.ಲಕ್ಷ್ಮೀ, ಬೆಂಗಳೂರು ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಲೇಖಕಿ ಪ್ರೊ.ಎಂ.ಎಸ್.ಆಶಾದೇವಿ, ಇದೇ ವಿಶ್ವವಿದ್ಯಾಲಯದ ತೆಲುಗು ಅಧ್ಯಯನ ವಿಭಾಗದ ಪ್ರೊ.ಜ್ಯೋತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಜಯಶ್ರೀ, ಬೆಂಗಳೂರು ವಿಶ್ವವಿದ್ಯಾಲಯದ ಸಮತಾ ದೇಶಮಾನೆ, ತುಮಕೂರು ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ನೂರ್ ಅಪ್ಪಾ ಹೀಗೆ ಪ್ರಮುಖರು ಸೇರಿದಂತೆ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ಪ್ರೊ. ಬಿ.ಕೆ.ತುಳಸಿಮಾಲಾ ಅವರು ಸೇವೆಯಿಂದ ನಿವೃತ್ತರಾದ ಬಳಿಕ ಪ್ರೊ. ಶಾಂತಾದೇವಿ ಟಿ. ಅವರು ಹಂಗಾಮಿ ಕುಲಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕುಲಪತಿ ನೇಮಕ ಸಂಬಂಧ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಫೆಬ್ರುವರಿ 10ರಂದು ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ ಅವರ ನೇತೃತ್ವದಲ್ಲಿ ಶೋಧನಾ ಸಮಿತಿ ರಚಿಸಿದೆ. ಅರ್ಜಿ ಪರಿಶೀಲಿಸಿ ಯೋಗ್ಯರಾದ ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು. ಯುಜಿಸಿ ನಾಮನಿರ್ದೇಶಿತ ಸದಸ್ಯರಾದ ಹರಿಯಾಣದ ಕೇಂದ್ರೀಯ ವಿ.ವಿ ಕುಲಪತಿ ಪ್ರೊ.ಸುಷ್ಮಾ ಯಾದವ್ ರಾಜ್ಯಪಾಲರಿಂದ ನಾಮ ನಿರ್ದೇಶಿತ ಸದಸ್ಯರಾದ ಮಧ್ಯಪ್ರದೇಶದ ಅಹಿಲ್ಯಾದೇವಿ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ರೇನು ಜೈನ್ ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯರಾದ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ.ಎಲ್.ಗೋಮತಿ ದೇವಿ ಹಾಗೂ ಇಲಾಖೆಯ ಉಪ ಕಾರ್ಯದರ್ಶಿ ಶಶಿಧರ ಜಿ. ಸಮಿತಿಯಲ್ಲಿ ಇದ್ದಾರೆ.