ಸುದ್ದಿ

ಜೂನ್ ತಿಂಗಳಲ್ಲಿ ಎಲ್ಲ ಕಂದಾಯ ಗ್ರಾಮಗಳಿಗೂ ಅಧಿಸೂಚನೆ; ಜುಲೈನಲ್ಲಿ ಹಕ್ಕುಪತ್ರ: ಕೃಷ್ಣ ಬೈರೇಗೌಡ

Share It

ಬೆಂಗಳೂರು: ಜೂನ್ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲ 3,614 ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ

ಶನಿವಾರ ಜಿಲ್ಲಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿದ ಅವರು, ‘ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಕಡುಬಡವರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದಲೇ ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುವ ನೀತಿಯನ್ನು 2017ರಲ್ಲಿ ರೂಪಿಸಲಾಗಿತ್ತು. ಆದರೆ, ಹಲವು ವರ್ಷಗಳ ನಂತರವೂ ಈ ಕೆಲಸ ಪೂರ್ಣವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 3,614 ಕಂದಾಯ ಗ್ರಾಮಗಳು ಇದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿ 1,400 ಗ್ರಾಮಗಳನ್ನು ರಚಿಸಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 1,200 ಗ್ರಾಮಗಳನ್ನು ರಚಿಸಲಾಗಿದೆ. ಅಂತಿಮ ಅಧಿಸೂಚನೆ ಆಗದ 1,014 ಗ್ರಾಮಗಳಿವೆ. ಈ ಕೆಲಸವನ್ನು ಶೀಘ್ರ ಮುಗಿಸಬೇಕು’ ಎಂದರು.

‘ಜುಲೈನಿಂದ ಜನಗಣತಿ ಆರಂಭವಾಗುವ ಸಾಧ್ಯತೆ ಇದೆ. ಹಾಗೆ ಆದರೆ, ಆನಂತರ ಅಧಿಸೂಚನೆ ಹೊರಡಿಸಲು ಆಗುವುದಿಲ್ಲ. ಹೀಗಾಗಿ ಜೂನ್ ಅಂತ್ಯದೊಳಗೇ ಎಲ್ಲ ಗ್ರಾಮಗಳಿಗೂ ಅಧಿಸೂಚನೆ ಹೊರಡಿಸಿ, ಜುಲೈ ನಂತರ
ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು’ ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.


Share It

You cannot copy content of this page