ಮೈಸೂರು: ತೋಟದ ಮಾಲೀಕ ಹಾಕಿದ್ದ ಸಿಸಿಟಿವಿ ದೃಶ್ಯ ಆಧರಿಸಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.
ಸರ್ಕಾರದ ₹15 ಲಕ್ಷ ಪರಿಹಾರ ಮೊತ್ತದ ಆಸೆಗಾಗಿ ಗಂಡನನ್ನು ತಾನೇ ಕೊಲೆ ಮಾಡಿ ಹುಲಿ ದಾಳಿಯಿಂದ ನನ್ನ ಗಂಡ ಸತ್ತಿದ್ದಾನೆ ಎಂದು ಕಥೆ ಕಟ್ಟಿದ್ದ ಸಲ್ಲಾಪುರಿ (40) ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಹುಣಸೂರು ತಾಲೂಕಿನ ಚಿಕ್ಕ ಹೆಜೂರು ಗ್ರಾಮದಲ್ಲಿ ನಡೆದಿದೆ.
ವೆಂಕಟಸ್ವಾಮಿ(45) ಪತ್ನಿಯಿಂದಲೇ ಕೊಲೆಗೀಡಾದ ಪತಿ. ಕಾಡು ಪ್ರಾಣಿಗಳ ದಾಳಿಗೆ ಬಲಿಯಾದ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಮೊತ್ತದ ಆಸೆಗಾಗಿ ಪತಿಯನ್ನು ತಾನೇ ಕೊಲೆ ಮಾಡಿ ಹುಲಿ ಎಳೆದುಕೊಂಡು ಹೋಗಿರುವುದಾಗಿ ಆರೋಪಿ ಮಹಿಳೆ ಸಲ್ಲಾಪುರಿ ಪೊಲೀಸರ ಮುಂದೆ ಸುಳ್ಳು ಕಥೆ ಕಟ್ಟಿದ್ದಳು.ತೋಟದ ಮಾಲೀಕ ಹಾಕಿದ್ದ ಸಿಸಿಟಿವಿ ದೃಶ್ಯ ಆಧರಿಸಿ ಕೊಲೆ ಪ್ರಕರಣವನ್ನು ಬೇಧಿಸಿರುವ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಏನಿದು ಪ್ರಕರಣ?: ಮಂಡ್ಯದ ಹಲಗೂರು
ಹೋಬಳಿ ಕದಂಪುರ ಗ್ರಾಮದವರಾದ ಸಲ್ಲಾಪುರಿ (40), ವೆಂಕಟಸ್ವಾಮಿ(45) ದಂಪತಿ ಊರಲ್ಲಿ ಸಾಲ ಮಾಡಿ ಮನೆ ಕಟ್ಟಿದ್ದರು. ಆ ಸಾಲ ತೀರಿಸಲು ಇಬ್ಬರೂ ಹುಣಸೂರು ತಾಲೂಕಿನ ಚಿಕ್ಕ ಹೆದ್ದೂರು ಗ್ರಾಮದ ಅಡಕೆ ತೋಟದ ಕೆಲಸಕ್ಕೆ ಬಂದು ತೋಟದಲ್ಲೇ ವಾಸವಿದ್ದರು. ಸೋಮವಾರ ಸಾಲದ ವಿಚಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ನಡೆದಿತ್ತು. ಹೆಂಡತಿ ತನ್ನ ಗಂಡನಿಗೆ ಊಟದಲ್ಲಿ ವಿಷ ಹಾಕಿ ಸಾಯಿಸಿದ್ದು, ನಂತರ ಗಂಡನನ್ನು ತೋಟದ ಮನೆಯ ಹಿಂಭಾಗದ ತಿಪ್ಪೆಗುಂಡಿಗೆ ಹಾಕಿ ಮೃತದೇಹವನ್ನು ಮುಚ್ಚಿದ್ದಳು.
ಮರುದಿನ ಸಲ್ಲಾಪುರಿ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ತನ್ನ ಗಂಡ ವೆಂಕಟಸ್ವಾಮಿ ನಾಪತ್ತೆಯಾಗಿದ್ದು, ಆತನನ್ನು ಹುಲಿ ಎಳೆದೊಯ್ದಿರಬಹುದು ಎಂದು ದೂರು ನೀಡಿದ್ದಳು.
ದೂರು ದಾಖಲಿಸಿಕೊಂಡ ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ತಾವು ಸಹ ತೋಟದ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಆಗ ತೋಟದ ಮನೆಯ ಮುಂಭಾಗದಲ್ಲಿ ಜಮೀನಿನ ಮಾಲೀಕ ಹಾಕಿದ್ದ ಸಿಸಿಟಿವಿ ಗಮನಿಸಿ. ಅದನ್ನು ಪರಿಶೀಲಿಸಿದ್ದಾರೆ. ಆರೋಪಿ ತನ್ನ ಗಂಡನ ಮೃತದೇಹವನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಹೆಂಡತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ತಾನು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಕಾಡು ಪ್ರಾಣಿಗಳ ದಾಳಿಯಿಂದ ಮೃತ ಪಟ್ಟರೆ ₹ 15 ಲಕ್ಷ ಪರಿಹಾರ ಸಿಗಲಿದೆ ಎಂಬ ಮಾಹಿತಿ ಪಡೆದಿದ್ದ ಪತ್ನಿ, ಗಂಡನನ್ನೇ ಕೊಲೆ ಮಾಡಿ ಕಾಡು ಪ್ರಾಣಿಗಳು ಗಂಡನನ್ನು ಹೊತ್ತೊಯ್ದಿವೆ ಎಂದು ಸುಳ್ಳು ಹೇಳಿ ಈಗ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಾಳೆ.