ಸುದ್ದಿ

​ಹೂವು ಮಾರುತ್ತಿದ್ದ ಕೈಗಳಿಗೆ ಈಗ ನ್ಯಾಯದಂಡ: ಆಟೋ ಚಾಲಕನ ಮಗಳು ಇನ್ನು ಸಿವಿಲ್ ಜಡ್ಜ್!

Share It

ಆನೇಕಲ್: ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಅದು ಕೇವಲ ಒಂದು ಆರ್ಥಿಕ ಸ್ಥಿತಿಯಷ್ಟೇ ಎಂಬುದನ್ನು ಆನೇಕಲ್ ತಾಲ್ಲೂಕಿನ ತಿರುಪಾಳ್ಯದ ನಾಗಿಣಿ ಎಲ್. ಸಾಬೀತುಪಡಿಸಿದ್ದಾರೆ. ಹೂವು ಮಾರುತ್ತಾ, ಆಟೋ ಚಾಲಕ ತಂದೆಗೆ ಆಸರೆಯಾಗಿದ್ದ ಹುಡುಗಿ ಈಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ.

​ಕಾಯಕದ ನಡುವೆ ಓದಿನ ತಪಸ್ಸು:
​ನಾಗಿಣಿ ಅವರ ತಂದೆ ಆಟೋ ಚಾಲಕರು, ತಾಯಿ ಹೂವು ಮಾರುವ ಕಾಯಕ ಮಾಡುವವರು. ಬಾಲ್ಯದಿಂದಲೇ ಕಡು ಬಡತನವನ್ನು ಕಂಡಿದ್ದ ನಾಗಿಣಿ, ತಾಯಿಗೆ ಹೂವು ಕಟ್ಟಲು ನೆರವಾಗುತ್ತಲೇ ಪುಸ್ತಕ ಹಿಡಿದು ಓದುತ್ತಿದ್ದರು. ಒಂದು ಕೈಯಲ್ಲಿ ಹೂವಿನ ಹಾರ ಸಿದ್ಧವಾಗುತ್ತಿದ್ದರೆ, ಮನಸ್ಸಿನಲ್ಲಿ ಕಾನೂನಿನ ಪಾಠಗಳು ಅಚ್ಚೊತ್ತುತ್ತಿದ್ದವು. ಪೋಷಕರ ಕಷ್ಟಕ್ಕೆ ಹೆಗಲು ಕೊಡುತ್ತಲೇ ಅವರು ಕಂಡ ಕನಸು ಇಂದು ನನಸಾಗಿದೆ.

ಸರ್ಕಾರಿ ಶಾಲೆಯ ಹೆಮ್ಮೆಯ ಪ್ರತಿಭೆ:
​ಇಂದಿನ ಇಂಗ್ಲಿಷ್ ಮಾಧ್ಯಮದ ಅಬ್ಬರದ ನಡುವೆ, ನಾಗಿಣಿ ಅವರು 1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿರುವುದು ವಿಶೇಷ. ಬಡತನದ ಬೇಗೆಯಲ್ಲೂ ದೃತಿಗೆಡದ ಅವರು, ಶ್ರದ್ಧೆ ಮತ್ತು ಪರಿಶ್ರಮವಿದ್ದರೆ ಎಂತಹ ಶಿಖರವನ್ನಾದರೂ ಏರಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

​ಯುವಜನತೆಗೆ ಸ್ಫೂರ್ತಿಯ ಸೆಲೆ:
​ಸಣ್ಣ ಪುಟ್ಟ ಸಮಸ್ಯೆಗಳಿಗೂ ಎದೆಗುಂದಿ ದಾರಿ ತಪ್ಪುವ ಇಂದಿನ ಯುವ ಪೀಳಿಗೆಗೆ ನಾಗಿಣಿ ಅವರ ಜೀವನ ಒಂದು ದೊಡ್ಡ ಪಾಠ. ಕಷ್ಟಗಳನ್ನೇ ಮೆಟ್ಟಿಲು ಮಾಡಿಕೊಂಡು ಬೆಳೆದು ನಿಂತ ಅವರ ಈ ಯಶಸ್ಸು, ರಾಜ್ಯದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಹೊಸ ಭರವಸೆ ನೀಡಿದೆ.


Share It

You cannot copy content of this page