ಸುದ್ದಿ

ವನ್ಯಜೀವಿಗಳ ನೋವಿಗೆ ಮಿಡಿಯುತ್ತಿದ್ದ ಜೀವಪರ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ನೀರಾನೆ ದಾಳಿಗೆ ಬಲಿ!

Share It

ಶಿವಮೊಗ್ಗ: ಅತಿಯಾದ ಕರ್ತವ್ಯ ಪ್ರಜ್ಞೆ, ಪ್ರಾಣಿ ಸಂಕುಲದ ಮೇಲಿನ ಅಪಾರ ಮಮತೆ ಹಾಗೂ ಧೈರ್ಯವೇ ಓರ್ವ ಪ್ರತಿಭಾವಂತ ಯುವ ಪಶುವೈದ್ಯೆಯ ಜೀವಕ್ಕೆ ಮುಳುವಾದ ಹೃದಯವಿದ್ರಾವಕ ಘಟನೆ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಸಂಭವಿಸಿದೆ.

ನಾಡಿನ ಭರವಸೆಯ ವನ್ಯಜೀವಿ ಚಿಕಿತ್ಸಕಿ ಡಾ. ಸಮೀಕ್ಷಾ ರೆಡ್ಡಿ ಅವರು ನೀರಾನೆಯ ದಾಳಿಗೆ ತುತ್ತಾಗಿ ವಿಧಿವಶರಾಗಿದ್ದಾರೆ. ​ತ್ಯಾವರೆಕೊಪ್ಪ ಮೃಗಾಲಯದ ನೀರಾನೆಯೊಂದು ಈ ಹಿಂದೆ ತನ್ನ ಎರಡು ಮರಿಗಳನ್ನು ವಿವಿಧ ಕಾರಣಗಳಿಂದ ಕಳೆದುಕೊಂಡಿತ್ತು. ಇದೀಗ ಅದೇ ನೀರಾನೆ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದು, ಈ ಬಾರಿಯಾದರೂ ಮರಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎನ್ನುವ ದೃಢ ಸಂಕಲ್ಪ ಡಾ. ಸಮೀಕ್ಷಾ ಅವರದ್ದಾಗಿತ್ತು.

​ಕಳೆದ ಕೆಲವು ದಿನಗಳಿಂದ ಗರ್ಭಿಣಿ ನೀರಾನೆಗೆ ಜ್ವರ ಕಾಣಿಸಿಕೊಂಡಿತ್ತು. ಅದರ ಆರೋಗ್ಯ ಸ್ಥಿತಿಯನ್ನು ಹತ್ತಿರದಿಂದ ಗಮನಿಸಬೇಕೆಂದು ನಿರ್ಧರಿಸಿದ ಸಮೀಕ್ಷಾ, ಯಾರಿಗೂ ಕಾಯದೆ ಮಧ್ಯರಾತ್ರಿಯೇ ಮೃಗಾಲಯಕ್ಕೆ ಧಾವಿಸಿದ್ದರು. ಪ್ರಾಣಿಪರ ಕಾಳಜಿಯೇ ಅವರಲ್ಲಿ ಎಂತಹ ಧೈರ್ಯ ತುಂಬಿತ್ತೆಂದರೆ, ಕತ್ತಲ ರಾತ್ರಿಯಲ್ಲಿ ಕೇವಲ ಒಬ್ಬ ನೈಟ್ ವಾಚ್‌ಮನ್ ನೆರವಿನೊಂದಿಗೆ ಅವರು ಕಾರ್ಯಾಚರಣೆಗೆ ಇಳಿದಿದ್ದರು.

​ದುರಂತ ಸಂಭವಿಸಿದ್ದು ಹೀಗೆ:
​ನೀರಾನೆಯ ದೇಹದ ಉಷ್ಣತೆಯನ್ನು ನಿಖರವಾಗಿ ಪರಿಶೀಲಿಸಲು ಅವರು ‘ಥರ್ಮಲ್ ಇಮೇಜಿಂಗ್ ಕ್ಯಾಮೆರಾ’ ಹಿಡಿದು ಏಣಿಯ ಮೂಲಕ ಕಮರಿಗೆ ಇಳಿದಿದ್ದರು. ಉಷ್ಣತೆಯನ್ನು ದಾಖಲಿಸಿ ಮೇಲೆ ಹತ್ತಿ ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಾಬರಿಗೊಂಡ ನೀರಾನೆ ಅವರ ಮೇಲೆ ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ಸಮೀಕ್ಷಾ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

​ಚಿರಸ್ಥಾಯಿ ಸೇವೆ: ​ಅಲ್ಪ ಅವಧಿಯಲ್ಲೇ ವನ್ಯಜೀವಿ ಚಿಕಿತ್ಸಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಡಾ.ಸಮೀಕ್ಷಾ, ಸದಾ ಕ್ರಿಯಾಶೀಲತೆಯಿಂದ ಕೂಡಿದ್ದರು. ಮೂಕ ಪ್ರಾಣಿಗಳ ನೋವಿಗೆ ಮಿಡಿಯುತ್ತಿದ್ದ ಅವರ ಜೀವಪರ ಹೃದಯವಂತಿಕೆ ಇಂದು ಇಡೀ ನಾಡನ್ನು ಕಂಬನಿ ಮಿಡಿಯುವಂತೆ ಮಾಡಿದೆ. ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಈ “ವನ್ಯಜೀವಿ ಸಂಜೀವಿನಿ”ಯ ಹೆಸರು ಪ್ರಾಣಿ ಪ್ರೇಮಿಗಳ ಮತ್ತು ನಾಡಿನ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ. ಅವರ ನಿಸ್ವಾರ್ಥ ಸೇವೆ ಮತ್ತು ಧೈರ್ಯ ಮುಂದಿನ ಪೀಳಿಗೆಯ ವೈದ್ಯರಿಗೆ ಸದಾ ಸ್ಫೂರ್ತಿಯಾಗಲಿದೆ.


Share It

You cannot copy content of this page