ಕಾಸರಗೋಡು: ಮದುವೆಯಾಗಿ ನೂರು ಕಾಲ ಸುಖವಾಗಿ ಬಾಳಬೇಕೆಂಬ ಕನಸು ಕಂಡಿದ್ದ ಜೋಡಿಯ ಬದುಕಿನಲ್ಲಿ ವಿಧಿ ವಿಲಕ್ಷಣವಾಗಿ ಆಟವಾಡಿದೆ. ವಿವಾಹ ನಿಶ್ಚಯವಾಗಿದ್ದ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಆಘಾತ ತಾಳಲಾರದೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಸಮೀಪದ ಕುಂಟಗೇರಡ್ಕದಲ್ಲಿ ಸಂಭವಿಸಿದೆ.
ಕುಂಟಗೇರಡ್ಕ ನಿವಾಸಿ ಜನಾರ್ದನ ಎಂಬವರ ಪುತ್ರಿ ಪ್ರಫುಲ್ಲಾ (26) ಮೃತಪಟ್ಟ ದುರ್ದೈವಿ. ತಮಿಳುನಾಡು ಮೂಲದ ಬ್ಯಾಂಕ್ ಉದ್ಯೋಗಿ ಮಣಿ ಎಂಬವರೊಂದಿಗೆ ಪ್ರಫುಲ್ಲಾರ ವಿವಾಹ ನಾಲ್ಕು ತಿಂಗಳ ಹಿಂದೆಯಷ್ಟೇ ನಿಶ್ಚಯವಾಗಿತ್ತು. ಬರುವ ನವೆಂಬರ್ ತಿಂಗಳಿನಲ್ಲಿ ಇವರ ಮದುವೆ ನಡೆಸಲು ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದರು.
ಸುಮಾರು ಒಂದು ತಿಂಗಳ ಹಿಂದೆ ಮಣಿ ಅವರು ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತನ್ನ ಬಾಳ ಸಂಗಾತಿಯಾಗಬೇಕಿದ್ದ ವ್ಯಕ್ತಿಯ ಸಾವು ಪ್ರಫುಲ್ಲಾ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಮಣಿಯ ಅಗಲಿಕೆಯ ನಂತರ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಮೇ 10ರಂದು ಮನೆಯವರೆಲ್ಲರೂ ವಿವಾಹ ಸಮಾರಂಭವೊಂದಕ್ಕೆ ತೆರಳಿದ್ದ ಸಂದರ್ಭದಲ್ಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರಫುಲ್ಲಾ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಭಾವಿ ಪತಿ ಮಣಿಯವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ತನ್ನ ಅಂತ್ಯಕ್ರಿಯೆಯನ್ನೂ ನೆರವೇರಿಸಬೇಕೆಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.