ಹೊಸದಿಲ್ಲಿ: ಹಿಂದೂ ಧರ್ಮವು ಜೀವನ ವಿಧಾನವಾಗಿದ್ದು, ಹಿಂದೂವಾಗಿ ಉಳಿಯಲು ದೇವಾಲಯಕ್ಕೆ ಹೋಗುವುದು ಅಥವಾ ಧಾರ್ಮಿಕ ಆಚರಣೆಗಳನ್ನು ಪಾಲಿಸುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು. ಮನೆಯೊಳಗೆ ದೀಪ ಹಚ್ಚಿದರೂ ವ್ಯಕ್ತಿಯ ನಂಬಿಕೆಯನ್ನು ಸಾಬೀತುಪಡಿಸಲು ಸಾಕು ಎಂದೂ ಪೀಠ ಹೇಳಿತು.
ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಹಾಗೂ ದಾವೂದಿ ಬೊಹ್ರಾಗಳು ಸೇರಿದಂತೆ ವಿವಿಧ ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಎಂ.ಎಂ. ಸುಂದ್ರೇಶ್, ಅಹ್ವಾನುದ್ದೀನ್ ಅಮಾನುಲ್ಲಾ ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ. ವರಾಲೆ, ಆರ್. ಮಹಾದೇವನ್ ಮತ್ತು ಜೋಯ್ಯಲ್ಯ ಬಾಗ್ನಿ ಪೀಠದಲ್ಲಿದ್ದರು.
ವಿಚಾರಣೆಯ 15ನೇ ದಿನ ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಡಾ. ಜಿ. ಮೋಹನ್ ಗೋಪಾಲ್, ಧಾರ್ಮಿಕ ಸಮುದಾಯಗಳ ಒಳಗಿನಿಂದಲೇ ಸಾಮಾಜಿಕ ನ್ಯಾಯಕ್ಕಾಗಿ ಬೇಡಿಕೆಗಳು ಬರುತ್ತಿವೆ ಎಂದು ವಾದಿಸಿದರು.
‘ಹಿಂದೂ ಧರ್ಮವನ್ನು ಧಾರ್ಮಿಕ ವರ್ಗವೆಂದು ವ್ಯಾಖ್ಯಾನಿಸಲಾಯಿತು. ನಂತರ 1966ರಲ್ಲಿ ಹಿಂದೂ ಎಂದರೆ ವೇದಗಳನ್ನು ಅತ್ಯುನ್ನತ ಅಧಿಕಾರವೆಂದು ಒಪ್ಪಿಕೊಳ್ಳುವವನು ಎಂದು ಹೇಳಲಾಯಿತು. ಆದರೆ ನಮ್ಮಲ್ಲಿ ಯಾರೂ ಹಾಗೆ ಹೇಳಿಲ್ಲ. ಇಂದು ಹಿಂದೂ ಎಂದು ಕರೆಯಲ್ಪಡುವ ಪ್ರತಿಯೊಬ್ಬರೂ ವೇದಗಳನ್ನು ಅತ್ಯುನ್ನತ ಅಧಿಕಾರವೆಂದು ಒಪ್ಪಿಕೊಳ್ಳುತ್ತಾರೆ ಎನ್ನುವುದು ಸತ್ಯವೇ?’ ಎಂದು ಅವರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, ‘ಅದಕ್ಕಾಗಿಯೇ ಹಿಂದೂ ಧರ್ಮವನ್ನು ಜೀವನ ವಿಧಾನ ಎಂದು ಕರೆಯಲಾಗುತ್ತದೆ. ಹಿಂದೂವಾಗಿ ಉಳಿಯಲು ದೇವಾಲಯಕ್ಕೆ ಹೋಗುವುದು ಅಥವಾ ಆಚರಣೆ ಮಾಡುವುದು ಕಡ್ಡಾಯವಲ್ಲ’ ಎಂದು ಹೇಳಿದರು.
ಧಾರ್ಮಿಕ ಆಚರಣೆಗಳನ್ನು ಪಾಲಿಸುವುದು ಕಡ್ಡಾಯವಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ನಂಬಿಕೆ ಹೊಂದುವ ಹಕ್ಕಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
‘ಒಬ್ಬ ವ್ಯಕ್ತಿ ತನ್ನ ಗುಡಿಸಲಿನೊಳಗೆ ದೀಪ ಹಚ್ಚಿದರೂ ಅವನ ಧರ್ಮ ಮತ್ತು ನಂಬಿಕೆಯನ್ನು ಸಾಬೀತುಪಡಿಸಲು ಸಾಕು’ ಎಂದು ಮುಖ್ಯ ನ್ಯಾಯಮೂರ್ತಿಯೂ ಹೇಳಿದರು.
ಈ ಮೊದಲು ಕೂಡ ಸಂವಿಧಾನ ಪೀಠವು, ಪ್ರತಿಯೊಂದು ಧಾರ್ಮಿಕ ಆಚರಣೆ ಅಥವಾ ಧರ್ಮದ ವಿಷಯಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ನೀಡಿದರೆ ನೂರಾರು ಅರ್ಜಿಗಳು ಬರುತ್ತವೆ. ಇದರಿಂದ ಪ್ರತಿಯೊಂದು ಧರ್ಮವೂ ‘ಒಡೆಯುವ’ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಭಿಪ್ರಾಯಪಟ್ಟಿತ್ತು.
ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 2018ರ ಸೆಪ್ಟೆಂಬರ್‌ನಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿದ್ದ ಆಚರಣೆಯನ್ನು 4-1 ಬಹುಮತದ ತೀರ್ಪಿನಲ್ಲಿ ಗೊಳಿಸಿತ್ತು. ಶತಮಾನಗಳಷ್ಟು ಹಳೆಯದಾದ ಆ ಅಚರಣೆ ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ಪೀಠ ತೀರ್ಪು ನೀಡಿತ್ತು.