ಬೆಂಗಳೂರು: ರಸ್ತೆ ಅಪಘಾತಕ್ಕೆ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಜತೆಗೆ ರಸ್ತೆಗುಂಡಿಯೂ ಕಾರಣ. ಹೀಗಾಗಿ ಬಿಬಿಎಂಪಿ ಹಾಗೂ ಗುತ್ತಿಗೆದಾರರನನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕೆಂದು ಕೋರಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಕಾರು ಚಾಲಕನ ವೇಗದ ಮತ್ತು ನಿರ್ಲಕ್ಷ್ಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಪಘಾತ ನಡೆದ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕಾನೂನಿನಲ್ಲಿ ಇಬ್ಬರು ಹೊಣೆಗಾರರನ್ನು ಪರಿಹಾರಕ್ಕೆ ನಿಗದಿಪಡಿಸಲಾಗದು. ಈ ಪ್ರಕರಣದಲ್ಲಿ ಅಪಘಾತಕ್ಕೆ ಯಾವ ವ್ಯಕ್ತಿಯು ಕಾರಣನಾಗಿರುತ್ತಾನೋ ಆತನೇ ಪರಿಹಾರ ಕೋರಲಾಗದು. ಘಟನೆಗೆ ಆತನ ನಿರ್ಲಕ್ಷ್ಯದ ಪಾತ್ರವೂ ಇದೆ ಎಂದು ಹೇಳಿದೆ.
ಏನಿದು ಪ್ರಕರಣ?: ಕೇರಳದ ಪಠಾಣಂತಿಟ್ಟ ಮೂಲದ ಆರ್.ಎಂ. ರಾಹುಲ್‌ಗೆ 2022ರ ಅ.19ರಂದು ಬೆಂಗಳೂರಿನಲ್ಲಿ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿಯಾಗಿತ್ತು.ಅಪಘಾತದಲ್ಲಿ ರಾಹುಲ್ ಹಾಗೂ ಸವಾರ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಅವರ ಕುಟುಂಬದವರು 20 ಲಕ್ಷ ರೂ. ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಗೆ (ಎಂಎಸಿಸಿ) ಅರ್ಜಿ ಸಲ್ಲಿಸಿದ್ದರು. ವಿಮಾ ಕಂಪನಿ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣದಲ್ಲಿ ಬೈಕ್ ಮಾಲೀಕ, ಬೈಕ್ ವಿಮಾದಾರರು, ಬಿಬಿಎಂಪಿ ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಕೋರಿತ್ತು. ಜತೆಗೆ ಅಪಘಾತಕ್ಕೆ ರಸ್ತೆಯಲ್ಲಿ ಗುಂಡಿಗಳು ಇದ್ದಿದ್ದೂ ಕಾರಣ ಎಂದು ಹೇಳಿತ್ತು. 2024ರ ಜು.1ರಂದು ನ್ಯಾಯಮಂಡಳಿ ವಿಮಾ ಕಂಪನಿಯ ಅರ್ಜಿಯನ್ನು ತಿರಸ್ಕರಿಸಿತ್ತು, ವಿಮಾ ಕಂಪನಿ ಆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು.