ಚಿನ್ನಸಂದ್ರ ಮತ್ತು ಕುರುಬೂರು ಸರ್ಕಾರಿ ಶಾಲೆಗಳಲ್ಲಿ ಯುಬಿಎ-ಎಸ್‌ಇಜಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಸಿಎಂಆರ್‌ಐಟಿ

ಬೆಂಗಳೂರು, ಡಿಸೆಂಬರ್ 2025: ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ಕೇಂದ್ರ ಸರ್ಕಾರದ ಉನ್ನತ್ ಭಾರತ್ ಅಭಿಯಾನ (ಯುಬಿಎ) – ಸೋಶಿಯಲ್ ಎಂಗೇಜ್‌ಮೆಂಟ್ ಗ್ರೂಪ್ (UBA-SEG) ಯೋಜನೆಯಡಿ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ “ವಿಜ್ಞಾನ ಪ್ರಯೋಗಾಲಯ” ಹಾಗೂ ಕುರುಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಮಕ್ಕಳಲ್ಲಿ ಎಲೆಕ್ಟ್ರಾನಿಕ್ಸ್ ಜನಪ್ರಿಯಗೊಳಿಸುವಿಕೆ” ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು.

ಚಿನ್ನಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಯೋಜನೆಯನ್ನು ಇಸಿಇ ವಿಭಾಗದ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಆರ್. ಪಾಟೀಲ್ ಅವರ ನೇತೃತ್ವದಲ್ಲಿ ಹಾಗೂ ಕುರುಬೂರು ಹಿರಿಯ ಪ್ರಾಥಮಿಕ ಶಾಲೆಯ ಎಲೆಕ್ಟ್ರಾನಿಕ್ಸ್ ಪ್ರಯೋಗ ಯೋಜನೆಯನ್ನು ಇಸಿಇ ವಿಭಾದ ಮುಖ್ಯಸ್ಥೆ ಡಾ. ಪಪ್ಪಾ ಅವರು ನೇತೃತ್ವದಲ್ಲಿ ಅನುಷ್ಠಾನಗೊಳಿಸಲಾಯಿತು.
ಗ್ರಾಮೀಣ ಶಾಲೆಗಳಲ್ಲಿ ಅನುಭವಾತ್ಮಕ STEM ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ, ಸಿಎಂಆರ್‌ಐಟಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸ್ವತಃ ವಿನ್ಯಾಸಗೊಳಿಸಿದ ‘ಡು-ಇಟ್-ಯುವರ್ಸೆಲ್ಫ್’ (DIY) ಕಿಟ್‌ಗಳನ್ನು ಬಳಸಿಕೊಂಡು ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡಿದರು.
ಈ ಯೋಜನೆ ಸಿದ್ಧಾಂತ ಮತ್ತು ಪ್ರಾಯೋಗಿಕತೆಯ ನಡುವೆ ಸೇತುವೆ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳಲ್ಲಿ ಕುತೂಹಲ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿತು.
ಯೋಜನೆಯ ಅನುಷ್ಠಾನದ ಪ್ರಮುಖ ಅಂಶಗಳು:
ಸಿಎಂಆರ್‌ಐಟಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಗುರುತಿಸಿತು.
ಕಾಲೇಜಿನ ಪ್ರಯೋಗಾಲಯಗಳಲ್ಲಿಯೇ ಸರಳ ಎಲೆಕ್ಟ್ರಾನಿಕ್ ಕಿಟ್‌ಗಳನ್ನು ಸಿದ್ಧಪಡಿಸಲಾಯಿತು.
ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕಿಟ್‌ಗಳ ಬಳಕೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ನಿರಂತರ ಕಲಿಕೆಗಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವಿಡಿಯೋ ಟ್ಯುಟೋರಿಯಲ್‌ಗಳನ್ನು ಒದಗಿಸಲಾಯಿತು.
ವಿದ್ಯಾರ್ಥಿಗಳು ಸ್ವತಃ ವೈರ್-ಕಟ್ ಅಲಾರಂ, ಅಗ್ನಿಶಾಮಕ ಡಿಟೆಕ್ಟರ್‌ಗಳು, ಸ್ಮಾರ್ಟ್ ನೀರಾವರಿ ವ್ಯವಸ್ಥೆ ಮತ್ತು ಮಿನಿ ನೈಟ್ ಲ್ಯಾಂಪ್‌ಗಳಂತಹ 25ಕ್ಕೂ ಹೆಚ್ಚು ಮಾದರಿಗಳನ್ನು ತಯಾರಿಸಲು ಕಲಿತರು.
ಶಿಕ್ಷಣಾಧಿಕಾರಿಗಳಿಂದ ಪ್ರಶಂಸೆ:
ಚಿಂತಾಮಣಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಶ್ರೀಮತಿ ಉಮಾದೇವಿ ಅವರು ಶಾಲೆಗೆ ಭೇಟಿ ನೀಡಿ, ಸಿಎಂಆರ್‌ಐಟಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಈ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.
ಯೋಜನೆಯ ಫಲಿತಾಂಶ:
ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಇದ್ದ ಭಯ ದೂರವಾಗಿ ಆಸಕ್ತಿ ಹೆಚ್ಚಿದೆ.
ಶಿಕ್ಷಕರಿಗೆ ಆಧುನಿಕ ಬೋಧನಾ ವಿಧಾನಗಳ ಬಗ್ಗೆ ತರಬೇತಿ ದೊರೆತಿದೆ.
ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಉಪಯುಕ್ತವಾದ ಸಣ್ಣ ಪುಟ್ಟ ಇಂಧನ ಮತ್ತು ನೀರು ಉಳಿಸುವ ಸಾಧನಗಳನ್ನು ತಯಾರಿಸಿದ್ದಾರೆ.
ಈ ಯೋಜನೆಯಿಂದ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಆತ್ಮವಿಶ್ವಾಸ ಮತ್ತು ಹೊಸ ಆವಿಷ್ಕಾರಗಳತ್ತ ಆಸಕ್ತಿ ಹೆಚ್ಚಾಗಿದೆ. ಪ್ರಾಯೋಗಿಕ ಕಲಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಭಾಗವಹಿಸುವಿಕೆ ಹೆಚ್ಚಿದೆಯೆಂದು ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಅನಿಸಿಕೆ:
”ಈ ಮೊದಲು ವಿಜ್ಞಾನ ಕಷ್ಟ ಎನಿಸುತ್ತಿತ್ತು, ಈಗ ನಾನೇ ಸ್ವತಃ ಸರ್ಕ್ಯೂಟ್ ತಯಾರಿಸಬಲ್ಲೆ. ನಾನು ಇಂಜಿನಿಯರ್ ಆಗಬೇಕೆಂದು ಬಯಸಿದ್ದೇನೆ,” ಎಂದು ಶಾಲೆಯ ವಿದ್ಯಾರ್ಥಿ ಹರ್ಷ ವ್ಯಕ್ತಪಡಿಸಿದರು.
ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಆರ್. ಪಾಟೀಲ್ ಅವರು
“ಈ ಯೋಜನೆ ಗ್ರಾಮೀಣ ಶಿಕ್ಷಣಾಭಿವೃದ್ಧಿಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆಗೆ ವೈಜ್ಞಾನಿಕತೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಇಸಿಇ ವಿಭಾಗದ ಮುಖ್ಯಸ್ಥರಾದ ಡಾ. ಪಪ್ಪಾ ಎಂ. ಅವರು ಮಾತನಾಡಿ, “ಎಲೆಕ್ಟ್ರಾನಿಕ್ಸ್ ಪ್ರಯೋಗಗಳು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಸೃಜನಶೀಲತೆಯನ್ನು ಮೂಡಿಸಿವೆ. ಇದು ಗ್ರಾಮೀಣ ಶಿಕ್ಷಣದ ಅಭಿವೃದ್ಧಿಗೆ ನಮ್ಮ ಕಿರು ಕೊಡುಗೆಯಾಗಿದೆ,”ಈ ಅವಕಾಶಕ್ಕಾಗಿ ಯುಬಿಎ ಹಾಗೂ ಸಿಎಂಆರ್‌ಐಟಿ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ಧನ್ಯವಾದ ತಿಳಿಸಿದರು.